ಚರಂಡಿ ಮತ್ತು ಚರಂಡಿ ವ್ಯವಸ್ಥೆ-
ಗ್ರಾಮಸಾರ, ರೊಚ್ಚು, ರಾಡಿ, ಮಳೆ ನೀರು ಮುಂತಾದವುಗಳ ಹರಿವನ್ನು ವ್ಯವಸ್ಥೆಗೊಳಿಸಲು ಮಾಡಿದ ನಾಲೆ ಮತ್ತು ಅಂಥ ನಾಲೆಗಳ ಒಟ್ಟು ಸಮೂಹ (ಸ್ಯೂವರ್ ಅಂಡ್ ಸ್ಯೂವರೇಜ್ ಸಿಸ್ಟಮ್). ಜನವಸತಿ ಸಾಂದ್ರವಾಗಿ ಇರುವಂಥ ಕೇರಿ, ಹಳ್ಳಿ, ನಗರಗಳಲ್ಲೆಲ್ಲ ಚರಂಡಿ ವ್ಯವಸ್ಥೆ ಅನಿವಾರ್ಯ. ಇಲ್ಲವಾದಲ್ಲಿ ಗ್ರಾಮಸಾರ ಸಿಕ್ಕಾಪಟ್ಟೆ ಹರಡಿಕೊಂಡು ಆರೋಗ್ಯಮಾರಕವಾಗುತ್ತದೆ. ನಗರದ ಪ್ರಸಕ್ತ ವ್ಯಾಪ್ತಿ. ಭೌಗೋಳಿಕ ಸನ್ನಿವೇಶ, ಭವಿಷ್ಯದಲ್ಲಿ ನಗರದ ವಿಸ್ತರಣೆ ಮುಂತಾದ ಎಲ್ಲ ಸಾಧ್ಯತೆಗಳನ್ನು ಪರಿಗಣಿಸಿ ಸಮಗ್ರವಾದ ಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸಬೇಕಾಗುತ್ತದೆ. ಇದಕ್ಕೆ ಹೊಂದಿಕೊಂಡು, ಎಂದರೆ ಪೂರಕವಾಗಿ, ಮನೆಗಳ, ಕೇರಿಗಳ ಮತ್ತು ಬಡಾವಣೆಗಳ ಉಪಚರಂಡಿ ವ್ಯವಸ್ಥೆಗಳು ಇರಬೇಕು. ಸಮಗ್ರವಾಗಿ ಹೇಳುವುದಾದರೆ ಕೊಳಾಯಿ ವ್ಯವಸ್ಥೆ ಒಂದು ನಗರದ ಅಪಧಮನಿಗಳಾದರೆ (ಶುದ್ಧ ನೀರಿನ ನಾಲೆಗಳು) ಚರಂಡಿ ವ್ಯವಸ್ಥೆ ಆ ನಗರದ ಅಭಿಧಮನಿಗಳು (ಮಲಿನ ನೀರಿನ ನಾಲೆಗಳು).

	ಚರಂಡಿಗಳನ್ನು ಮುಖ್ಯವಾಗಿ ಮೂರು ವರ್ಗಗಳಾಗಿ ವಿಭಾಗಿಸಬಹುದು.

	1 ಸಂಯುಕ್ತ ಚರಂಡಿ : ಇದರಲ್ಲಿ ಮಳೆಯಿಂದ ಹರಿದುಬರುವ ನೀರು ಹಾಗೂ ಹೊಲಸುನೀರು ಎರಡೂ ಒಟ್ಟಿಗೆ ಹರಿದು ಸಂಸ್ಕರಣವಾಗುವ ಜಾಗಕ್ಕೆ ಹೋಗಿ ಬೀಳುವುದು.

	2 ಪ್ರತ್ಯೇಕ ಚರಂಡಿ ವ್ಯವಸ್ಥೆ : ಹೊಲಸು ನೀರು ಹಾಗೂ ಮಳೆಯ ನೀರು ಬೇರೆ ಬೇರೆ ಚರಂಡಿಗಳಲ್ಲಿ ಹರಿದು ಹೋಗುವ ಏರ್ಪಾಡು. ಹೊಲಸು ನೀರು ಸಂಸ್ಕರಣವಾಗುವ ಕಡೆಗೆ ಹರಿದುಹೋಗುವುದು. ಮಳೆಯ ನೀರು ಸಮುದ್ರ, ನದಿ ಅಥವಾ ಕೆರೆಗಳಿಗೆ ಹೋಗಿ ಸೇರುವುದು.

	3 ಆಂಶಿಕವಾಗಿ ಪ್ರತ್ಯೇಕ ಚರಂಡಿ ವ್ಯವಸ್ಥೆ : ಮನೆಗಳ ಮುಂಭಾಗದ ಅಂಗಳ ಹಾಗೂ ಮಾಡಿನ ನೀರು ಮಳೆಯ ನೀರು ಹರಿದು ಹೋಗುವ ಚರಂಡಿಯಲ್ಲಿಯೇ ಹರಿದುಹೋಗುವಂತೆ ಏರ್ಪಡಿಸಿರಲಾಗುತ್ತದೆ. 
ಚರಂಡಿ ವ್ಯವಸ್ಥೆ ನೆಲದ ಮೇಲಿರಬಹುದು, ನೆಲದ ಒಳಗೆ ಹುದುಗಿ ಇರಬಹುದು. ಮೊದಲಿನದರ ಹೆಸರು ಹೊರಚರಂಡಿ ವ್ಯವಸ್ಥೆ, ಎರಡನೆಯದರ ಹೆಸರು ಒಳಚರಂಡಿ ವ್ಯವಸ್ಥೆ. ಸಾಮಾನ್ಯವಾಗಿ ರಸ್ತೆಯ ಮೇಲ್ಭಾಗದಲ್ಲಿ ಕಟ್ಟುವ ಚರಂಡಿಗಳು (ಎಂದರೆ ಹೊರಚರಂಡಿಗಳು) ಪಟ್ಟಣಗಳಲ್ಲಿ ಮಳೆಯ ನೀರು ಹರಿದುಹೋಗಲು ಅವಕಾಶ ಕೊಡುತ್ತವೆ. ಗ್ರಾಮಾಂತರ ಪ್ರದೇಶಗಳಲ್ಲಿ ಹೊಲಸು ನೀರನ್ನು ಸಾಗಿಸಲು ಕೂಡ ಹೊರಚರಂಡಿಗಳನ್ನು ಉಪಯೋಗಿಸುವುದುಂಟು. ಇವನ್ನು ರಸ್ತೆಯ ಅಂಚಿನಲ್ಲಿ ಮನೆಗಳಿಗೆ ತಗುಲಿದಂತೆ ನಿರ್ಮಿಸುತ್ತಾರೆ. ಒಳಚರಂಡಿ ವ್ಯವಸ್ಥೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಒಳಚರಂಡಿಗಳನ್ನು ರಸ್ತೆಯ ಮಧ್ಯದಲ್ಲಿ ನಿರ್ಮಿಸುತ್ತಾರೆ.

ಚರಂಡಿ ನಿರ್ಮಾಣಕ್ಕೆ ವಸ್ತುಗಳನ್ನು ಆಯುವಾಗ ಈ ಮುಂದಿನ ಅಂಶಗಳನ್ನು ಲಕ್ಷ್ಯದಲ್ಲಿರಿಸಬೇಕು. ನೀರು ಸರಾಗವಾಗಿ ಹರಿದು ಹೋಗಬೇಕು, ಮಾತ್ರವಲ್ಲ ಒಂದಿಷ್ಟೂ ನೆಲದೊಳಕ್ಕೆ ಇಂಗಿಹೋಗಿ ಕುಡಿಯುವ ನೀರಿನೊಡನೆ ಬೆರೆಯಬಾರದು. ಚರಂಡಿಗಳು ಬಾಳಿಕೆ ಬರಬೇಕಾದರೆ ಹೊಲಸಿನಲ್ಲಿರುವ ಆಮ್ಲಗಳು ಚರಂಡಿ ನಿರ್ಮಾಣದಲ್ಲಿ ಉಪಯೋಗಿಸುವ ವಸ್ತುಗಳ ಮೇಲೆ ಯಾವ ರಾಸಾಯನಿಕ ಕ್ರಿಯೆಯನ್ನೂ ಉಂಟುಮಾಡಬಾರದು. ಹೊಲಸು ನೀರಿನಲ್ಲಿ ಹರಿದುಹೋಗುವ ಗಟ್ಟಿ ಪದಾರ್ಥಗಳ ಉಜ್ಜುವಿಕೆಯಿಂದ ಚರಂಡಿಯ ಒಳಮೈ ಹಾಳಾಗಬಾರದು. ಚರಂಡಿಯ ಪೈಪುಗಳು ಸಾಕಷ್ಟು ಸಾಮಥ್ರ್ಯಯುತವಾಗಿದ್ದು ಅವುಗಳ ಮೇಲೆ ಬೀಳುವ ಮಣ್ಣಿನ ಮತ್ತು ಇತರ ಹೊರೆಯ ತೂಕವನ್ನು ತಡೆದುಕೊಳ್ಳುವಂತಿರಬೇಕು. ಒಳಗೆ ಹರಿಯುವ ನೀರಿನ ಒತ್ತಡದಿಂದ ಪೈಪುಗಳಿಗೆ ಯಾವ ಹಾನಿಯೂ ಒದಗಬಾರದು. ಒಂದು ಪೈಪನ್ನು ಇನ್ನೊಂದು ಪೈಪಿಗೆ ಜೋಡಿಸುವ ಕೆಲಸ ಬಹಳ ಬೇಗ ಹಾಗೂ ಉತ್ತಮವಾಗಿ ಆಗಬೇಕು, ಜೋಡಣೆಯ ಜಾಗ ಗಟ್ಟಿಯಾಗಿದ್ದು ಒಳಗಡೆ ಹರಿಯುವ ಪದಾರ್ಥಗಳು ಹೊರಬರದಂತಿರಬೇಕು. ಚರಂಡಿಗಳ ನಿರ್ಮಾಣ ವೆಚ್ಚ ಮಿತಿಯಲ್ಲಿರಬೇಕು.

ನಿರ್ಮಾಣರೀತಿ : ಚರಂಡಿಯನ್ನು ಕಲ್ಲು, ಇಟ್ಟಿಗೆ, ಗಾರೆ, ಸಿಮೆಂಟ್ ಪದಾರ್ಥಗಳನ್ನು ಉಪಯೋಗಿಸಿ ಕಟ್ಟಬಹುದು; ಅಥವಾ ಸಾಮಥ್ರ್ಯಯುತವಾದ ಸಾಕಷ್ಟು ದೊಡ್ಡಗಾತ್ರದ ಪೈಪುಗಳನ್ನು ಉಪಯೋಗಿಸಿಯೂ ಕಟ್ಟಬಹುದು. ಒಳಚರಂಡಿ ಯೋಜನೆ ಪ್ರಚಲಿತವಾಗಿರುವಲ್ಲೆಲ್ಲ ಪೈಪುಗಳ ಬಳಕೆಯೇ ಹೆಚ್ಚು ವ್ಯಾಪಕ. ಈ ಪೈಪುಗಳಲ್ಲಿ ಮೂರು ಬಗೆಗಳಿವೆ: ಪೂರ್ವಸಿದ್ಧ ಪೈಪುಗಳು, ಅರ್ಧಸಿದ್ಧ ಪೈಪುಗಳು, ಚರಂಡಿಯನ್ನು ಕಟ್ಟಬೇಕಾದ ಸ್ಥಳದಲ್ಲೇ ನಿರ್ಮಿಸಿದ ಪೈಪುಗಳು. ಚರಂಡಿಯ ಕೆಲಸದಲ್ಲಿ ಈ ಕೆಳಗಿನ ವಿವಿಧ ರೀತಿಯ ಪೈಪುಗಳನ್ನು ಬಳಸುತ್ತಾರೆ. 1 ಗಾಜಿನಂತೆ ನುಣುಪಾಗಿರುವ ಜೇಡಿಮಣ್ಣಿನ ಪೈಪುಗಳು ಅಥವಾ ಸಿಲಿಕ ಬೆರೆಸಿದ ಜೇಡಿಮಣ್ಣಿನ ಪೈಪುಗಳು. 2 ಸಾದಾ ಕಾಂಕ್ರೀಟ್ ಪೈಪುಗಳು. 3 ಪ್ರಬಲಿತ ಕಾಂಕ್ರೀಟ್ ಪೈಪುಳಗಳು 4 ಕಲ್ನಾರು-ಸಿಮೆಂಟ್ ಪೈಪುಗಳು. 5 ತಾಂಡವಾಳದ ಪೈಪುಗಳು. 6 ಉಕ್ಕಿನ ಪೈಪುಗಳು.
ಚರಂಡಿಗಳ ನಿರ್ಮಾಣ ಆಲೇಖ್ಯ : ಎರಡು ಮ್ಯಾನ್‍ಹೋಲ್ (ಆಳುಗುಂಡಿ) ಅಂತರದಲ್ಲಿ ನಿರ್ಮಿಸುವ ಚರಂಡಿಯ ನಕಾಶೆಯನ್ನು ಮಾನಕಾನುಸಾರ ಮೊದಲು ತಯಾರಿಸಿಕೊಳ್ಳಬೇಕು. ಈ ರೀತಿ ಪ್ರತಿ ಎರಡು ಮ್ಯಾನ್‍ಹೋಲ್‍ಗಳನ್ನು ಜೋಡಿಸುವ ಎಲ್ಲ ಚರಂಡಿಗಳ ನಕಾಶೆಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ನಕಾಶೆಯಲ್ಲಿ ಚರಂಡಿಯ ಗಾತ್ರ ಉದ್ದ ಹಾಗೂ ಚರಂಡಿ ಕಟ್ಟಲು ಉಪಯೋಗಿಸುವ ಪೈಪುಗಳ ಪೂರ್ತಿ ವಿವರಗಳು ಇರಬೇಕು.

	ಚರಂಡಿಗಳ ನಿರ್ಮಾಣ : 1 ಮ್ಯಾನ್ ಹೋಲ್ಸ್‍ಗಳ ಸ್ಥಳಗಳನ್ನು ಪಟ್ಟಣದ ರಸ್ತೆಗಳಲ್ಲಿ ಗುರುತಿಸಿಕೊಳ್ಳಬೇಕು. ಇವುಗಳ ನಿಖರವಾದ ಸ್ಥಳಗಳನ್ನು ನಕಾಶೆಯಿಂದ ಪಡೆಯಬೇಕು.

	2 ಎರಡು ಹತ್ತಿರದ ಮ್ಯಾನ್‍ಹೋಲ್ ಸ್ಥಳಗಳನ್ನು ಒಂದು ನೀಳವಾದ ಗೆರೆಯಿಂದ ಸೇರಿಸಬೇಕು. ಇದು ಚರಂಡಿಯ ಮಧ್ಯೆ ಹಾದು ಹೋಗುವ ರೇಖೆಗೆ ಸಮವಾಗಿರಬೇಕು.

	3 ಚರಂಡಿಯನ್ನು ಸಂಸ್ಕರಣ ಕೇಂದ್ರದ ಜಾಗದಿಂದ ಕಟ್ಟಲು ಪ್ರಾರಂಭಿಸಬೇಕು. ಇದರಿಂದ ಒಂದು ಅನುಕೂಲತೆ ಉಂಟು. ಒಂದೊಂದು ಬಡಾವಣೆಯಲ್ಲೂ ಕೆಲಸ ಪೂರ್ತಿ ಆದಂತೆ ಅಲ್ಲಿಂದ ಸಂಸ್ಕರಣ ಕೇಂದ್ರದವರೆಗೆ ಚರಂಡಿಯನ್ನು ಉಪಯೋಗಕ್ಕಾಗಿ ಬಿಟ್ಟುಕೊಡಬಹುದು.

	4 ಚರಂಡಿಯನ್ನು ಕಟ್ಟುತ್ತ ಹೋದಂತೆ ನಕಾಶೆಯಲ್ಲಿ ಕಾಣಿಸಿರುವ ಓಟಕ್ಕೆ ಬೇಕಾದ ಎತ್ತರವನ್ನು ಕೊಡುತ್ತ ಹೋಗಬೇಕು. ಆಗಾಗ ಮೋಜಣಿ ಮಾಡುವುದರಿಂದ ಇದನ್ನು ಸರಿಯಾದ ರೀತಿಯಲ್ಲಿ ಸಾಧಿಸಬಹುದು. ಚರಂಡಿಗೆ ಎಷ್ಟು ಓಟದ ಎತ್ತರ ಕೊಡಬೇಕು ಎಂಬುದನ್ನು ಅಲ್ಲಲ್ಲಿ ಮ್ಯಾನ್‍ಹೋಲ್‍ಗಳನ್ನು ಸೇರಿಸುವ ರೇಖೆಯ ಮೇಲೆ ಗುರ್ತಿಸಬೇಕು. ಅನಂತರ ಗುಂಡಿಗಳನ್ನು ಅಗೆಯಲು ಪ್ರಾರಂಭಿಸಬೇಕು. ಚರಂಡಿಯ ತಳಭಾಗವನ್ನು ಚರಂಡಿಗೆ ಸರಿಯಾದ ಓಟ ಸಿಕ್ಕುವಂತೆ ರಚಿಸಬೇಕು.

	6 ಗುಂಡಿಯನ್ನು ಅಗೆಯುವಾಗ ಅಂತರ್ಜಲ ಸಿಕ್ಕಿದ್ದಲ್ಲಿ ಅದನ್ನು ಪಕ್ಕದಲ್ಲಿ ಒಂದು ಸಣ್ಣ ಚರಂಡಿಯನ್ನು ನಿರ್ಮಿಸಿ ಅಥವಾ ಪಂಪನ್ನು ಉಪಯೋಗಿಸಿ ಹೊರಹಾಕಬೇಕು.

	7 ಚರಂಡಿಯ ತಳಭಾಗದಲ್ಲಿ 7.5 ರಿಂದ 15 ಸೆಂ.ಮೀ. ದಪ್ಪದ ಕಾಂಕ್ರೀಟ್ ಪದರವನ್ನು ಕಟ್ಟಬೇಕು. ಆದರೆ ನೆಲದಲ್ಲೇ ಬೇಕಾದ ಆಳದಲ್ಲಿ ಕಲ್ಲು ಸಿಕ್ಕಿದರೆ ಕಾಂಕ್ರೀಟ್ ಪದರದ ಅವಶ್ಯಕತೆ ಇಲ್ಲ. ಈ ಕಾಂಕ್ರೀಟ್ ಪದರ ಪೈಪುಗಳಿಗೆ ಒಳ್ಳೆಯ ಅಡಿಪಾಯವಾಗಿದ್ದು ಸಾಕಷ್ಟು ಸಾಮಥ್ರ್ಯವನ್ನು ಒದಗಿಸುತ್ತದೆ.

	8 ವೃತ್ತಾಕಾರವಲ್ಲದ ಇತರ ಚರಂಡಿಗಳನ್ನು ಸ್ಥಳದಲ್ಲೇ ಕಟ್ಟಬೇಕು. ಇವನ್ನು ಕಟ್ಟುವಾಗ ಕಾಂಕ್ರೀಟಿನ ಸರಿಯಾದ ಅಡಿಪಾಯ ಹಾಕಿ ಅದರ ಮೇಲೆ ಚರಂಡಿಯ ಒಂದೊಂದೇ ಭಾಗಗಳನ್ನು ಕಟ್ಟುತ್ತ ಹೋಗಬೇಕು.

	9 ಕಾಂಕ್ರೀಟ್ ಚರಂಡಿಗಳನ್ನು ಎರಡು ಮ್ಯಾನ್‍ಹೋಲ್‍ಗಳ ಅಂತರದಲ್ಲಿ ಒಟ್ಟಿಗೆ ಒಂದೇ ಸಲ ಕಟ್ಟಬೇಕು. ದೊಡ್ಡಚರಂಡಿಗಳಾದರೆ ಮೊದಲು ತಳಭಾಗವನ್ನು ಕಟ್ಟಿ ಆ ಮೇಲೆ ಪಕ್ಕ ಹಾಗೂ ಮೇಲ್ಭಾಗವನ್ನು ಕಟ್ಟಬೇಕು.

	10 ಚರಂಡಿ ನಿರ್ಮಾಣದ ಜೊತೆಗೆ ಮ್ಯಾನ್‍ಹೋಲ್‍ಗಳನ್ನೂ ಕಟ್ಟುತ್ತ ಹೋಗಬೇಕು. ಇದರಿಂದ ಚರಂಡಿ ಹಾಗೂ ಮ್ಯಾನ್‍ಹೋಲ್‍ಗಳು ಒಟ್ಟಿಗೇ ತಯಾರಾಗಿ ಉಪಯೋಗಕ್ಕೆ ಬಿಡಲು ಅನುಕೂಲವಾಗುತ್ತದೆ.

	11 ಚರಂಡಿಯ ಭಾಗಗಳನ್ನು ಪೂರ್ತಿಯಾಗಿ ಕಟ್ಟಿದ ಬಳಿಕ ಅವು ಒಟ್ಟಿಗೆ ಹೊಂದಿಕೊಳ್ಳುವಂತೆ ಸ್ವಲ್ಪ ಕಾಲ ಬಿಡಬೇಕು. ಆಗ, ಜೋಡಿಸಿದ ಭಾಗಗಳು ಗಟ್ಟಿಯಾಗಿ ಹರಿಯುವ ನೀರು ಹೊರಬರದಂತೆ ಸಹಾಯಕವಾಗುವುದು.

	12 ಚರಂಡಿಗಾಗಿ ತೋಡಿದ ಗುಂಡಿಗಳನ್ನು ಮುಚ್ಚುವ ಮೊದಲು ಚರಂಡಿಯನ್ನು ಸರಿಯಾದ ಪರೀಕ್ಷೆಗೆ ಒಳಪಡಿಸಬೇಕು. ಈ ಪರೀಕ್ಷೆಯಿಂದ ಪೈಪುಗಳನ್ನು ಜೋಡಿಸಿದ ಭಾಗಗಳು ಸರಿಯಾಗಿ ಇವೆಯೇ ಅಥವಾ ಇಲ್ಲವೇ ಎಂಬುದು ತಿಳಿದು ಬರುವುದು. ಇದರಿಂದ ಸರಿಯಾಗಿಲ್ಲದ ಪೈಪುಗಳನ್ನು ಪತ್ತೆ ಹಚ್ಚಿ ಅವನ್ನು ತೆಗೆದು ಬೇರೆ ಉತ್ತಮವಾದ ಪೈಪುಗಳನ್ನು ಜೋಡಿಸಬಹುದು. 

	13 ಈ ಪರೀಕ್ಷೆ ಮುಗಿದ ತರುವಾಯ ಗುಂಡಿಯನ್ನು ತೋಡುವಾಗ ತೆಗೆದ ಮಣ್ಣಿನಿಂದಲೇ ಆ ಗುಂಡಿಯನ್ನು ಹಂತ ಹಂತವಾಗಿ ಮುಚ್ಚಬೇಕು. ಗುಂಡಿ ಮುಚ್ಚಿದ ಮೇಲ್ಭಾಗ ರಸ್ತೆಯ ಸಮಕ್ಕೆ ಬರುವಂತೆ ಇರಬೇಕು.

ಚಿತ್ರ-1

	ಚರಂಡಿಯ ವಿವಿಧ ವಿನ್ಯಾಸಗಳು. 1 ವರ್ತುಲಾಕಾರದ ಕಾಂಕ್ರೀಟ್ ಚರಂಡಿಗಳು : 150-1200 ಮಿಮೀ ವ್ಯಾಸದವರೆಗೆ ನಿರ್ಮಿಸಲಾಗುವುದು. ಇವು ಉಕ್ಕಿನ ಸರಳುಗಳು ಇರುವುದರಿಂದ ಬಹಳ ಗಟ್ಟಿಯಾಗಿರುತ್ತವೆ.
2. ವರ್ತುಲಾಕೃತಿಯ ಇಟ್ಟಿಗೆ ಅಥವಾ ಕಾಂಕ್ರೀಟ್ ಚರಂಡಿಗಳು : ಬಹಳ ಆಳದಲ್ಲಿ ಚರಂಡಿಗಳನ್ನು ಕಟ್ಟಬೇಕಾದಲ್ಲಿ ಸುರಂಗಗಳನ್ನು ತೋಡಬೇಕಾಗುತ್ತದೆ. ಅಂಥ ಕಡೆ ಈ ರೀತಿಯ ಚರಂಡಿಗಳು ಬಹಳ ಅನುಕೂಲ. ಮೇಲ್ಗಡೆಯ ಮಣ್ಣಿನ ತೂಕವನ್ನು ತಡೆಯಲು ಒಂದು ಅಥವಾ ಎರಡು ಪದರಗಳ ಇಟ್ಟಿಗೆಯ ಕಮಾನನ್ನು ಕಟ್ಟಬೇಕು. ಹೀಗೆ ನಿರ್ಮಿಸಿದ ಚರಂಡಿಯನ್ನು ಒಟ್ಟಿನಲ್ಲಿ ಕಾಂಕ್ರೀಟ್ ಆವರಣದಿಂದ ಮುಚ್ಚಬೇಕು.

ಚಿತ್ರ-2

3 ಅಂಡಾಕಾರದ ಚರಂಡಿ : ಇದನ್ನು ಕಾಂಕ್ರೀಟಿನ ಒಳ್ಳೆಯ ಅಡಿಪಾಯದ ಮೇಲೆ ಕಟ್ಟುವರು. ಸಾಧಾರಣವಾಗಿ ಕೊಚ್ಚೆನೀರು ಹಾಗೂ ಮಳೆನೀರು ಎರಡನ್ನೂ ಒಟ್ಟಿಗೆ ಸಾಗಿಸಲು ಇವುಗಳ ಉಪಯೋಗ ಉಂಟು. 

ಚಿತ್ರ-3

ಕೆಲವು ಸಲ ಅಂಡಾಕಾರದ ಚರಂಡಿಗಳ ತಳದ ಒಂದು ಭಾಗವನ್ನು ಸ್ವಲ್ಪ ಆಳವಾಗಿ ಕಟ್ಟಲಾಗುವುದು. ಈ ಭಾಗ ಒಣ ಹವೆಯ ಸಮಯದಲ್ಲಿ ಬರೇ ಕೊಚ್ಚೆ ನೀರು ಹರಿಯಲು ಬಹಳ ಉಪಯುಕ್ತ.
4 ಕುದುರೆ ಲಾಳದ ಆಕಾರದ ಚರಂಡಿ : ಚರಂಡಿಯಲ್ಲಿ ಹರಿಯುವ ನೀರು ಹೆಚ್ಚಾಗಿದ್ದಲ್ಲಿ ಈ ಆಕಾರದ ಚರಂಡಿ ಬಹಳ ಅನುಕೂಲ. ಇವುಗಳಲ್ಲಿ ತಳ ಬಹಳ ಅಗಲವಾಗಿದ್ದು ಹೆಚ್ಚಿನ ನೀರನ್ನು ಸಾಗಿಸಲು ಉಪಯುಕ್ತವಾಗಿದೆ. 

ಚಿತ್ರ-4

ದೊಡ್ಡ ಚರಂಡಿಗಳ ನಿರ್ಮಾಣದಲ್ಲಿ ವರ್ತುಳಾಕಾರದ ಹಾಗೂ ಅಂಡಾಕಾರದ ಚರಂಡಿಗಳ ವಿನ್ಯಾಸ ಅಷ್ಟಾಗಿ ಗಟ್ಟಿಯಾಗಿರುವುದಿಲ್ಲ. ಅಂಥ ದೊಡ್ಡ ಚರಂಡಿಗಳ ನಿರ್ಮಾಣದಲ್ಲಿ ಈ ಕುದುರೆ ಲಾಳದ ಆಕಾರದವು ಬಹಳ ಗಟ್ಟಿಯಾಗಿರುವುವು.

		5 ಆಯಾಕಾರದ ಮತ್ತು ಗ ಆಕಾರದ ಚರಂಡಿಗಳು : ನೀರಿನ ಓಟವನ್ನು ಸ್ವಲ್ಪಮಟ್ಟಿಗೆ ತಡೆಹಿಡಿಯಲು ಚರಂಡಿಗಳು ಬಹಳ ಅನುಕೂಲವಾದವು. ತಳಭಾಗವನ್ನು ಗ ಆಕಾರದಲ್ಲಿ ಕಟ್ಟಿದರೆ ನೀರಿನ ಓಟಕ್ಕೆ ಅನುಕೂಲವಾಗುವುದು.

6 ಅರ್ಧವರ್ತುಳಾಕಾರದ ಚರಂಡಿ : ಇದರ ತಳ ಸಾಕಷ್ಟು ಅಗಲವಾಗಿದ್ದು ದೊಡ್ಡ ದೊಡ್ಡ ಚರಂಡಿಗಳನ್ನು ನಿರ್ಮಿಸುವಲ್ಲಿ ಈ ಆಕಾರ ಬಹಳ ಅನುಕೂಲ.

7 ಪರವಲಯದ ಆಕಾರದ ಚರಂಡಿ : ಈ ರೀತಿಯ ಆಕಾರದ ಚರಂಡಿ ಹೆಚ್ಚಿನ ನೀರನ್ನು ಸಾಗಿಸಲು ಅನುಕೂಲ.
8 ಬುಟ್ಟಿಯ ಹಿಡಿಯ ಆಕಾರದ ಚರಂಡಿ: ಇದು ಮಳೆನೀರು ಹಾಗೂ ಹೊಲಸು ನೀರನ್ನು ಒಟ್ಟಿಗೆ ಸಾಗಿಸಲು ಬಹಳ ಅನುಕೂಲ. ಸ್ವಲ್ಪ ಆಳವಾಗಿರುವ ಇದರ ತಳದ ಭಾಗ ಒಣ ಹವೆಯಲ್ಲಿ ಬರೇ ಹೊಲಸು ನೀರನ್ನು ಸಾಗಿಸಲು ಬಹಳ ಉಪಯುಕ್ತ.

	9 ಅತಿ ಮೆದುವಾದ ಮಣ್ಣಿನಲ್ಲಿ ದೊಡ್ಡ ಚರಂಡಿಗಳನ್ನು ಕಟ್ಟಬೇಕಾದರೆ ಚರಂಡಿಗಳಿಗೆ ಬಲವಾದ ಅಡಿಪ್ರಾಯವಿರಬೇಕು. ಕಾಂಕ್ರೀಟಿನ ಒಡ್ಡುಗಳನ್ನು ಕಟ್ಟಿ ಅವುಗಳ ಮೇಲೆ ಕಾಂಕ್ರೀಟ್ ಚಪ್ಪಡಿಗಳನ್ನು ಕಟ್ಟಿ ಅದರ ಮೇಲೆ ಚರಂಡಿಗಳನ್ನು ನಿರ್ಮಿಸಬೇಕು. ಉದಾಹರಣೆಗಾಗಿ ಒಂದು ವಿಧಾನವನ್ನು ಚಿತ್ರದಲ್ಲಿ ಕಾಣಿಸಿವೆ.

ಚಿತ್ರ-5

	ಮಳೆನೀರಿನ ಚರಂಡಿಗಳು : ಇವುಗಳ ನಿರ್ಮಾಣ ಹಾಗೂ ಅವಶ್ಯಕತೆಗಳನ್ನು ತಿಳಿದುಕೊಳ್ಳುವ ಮೊದಲು ಪ್ರತಿಯೊಂದು ಪ್ರದೇಶದಲ್ಲೂ ಬೀಳುವ ವಾರ್ಷಿಕ ಮಳೆಯ ಮೊತ್ತವನ್ನು ತಿಳಿದಿರಬೇಕು. ಸಾಧಾರಣವಾಗಿ ವರ್ಷದಲ್ಲಿ ಸರಾಸರಿ 76 ಸೆಂ.ಮೀ.ಗಿಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಹೊಲಸು ನೀರು ಮತ್ತು ಮಳೆನೀರನ್ನು ಸಾಗಿಸಲು ಒಂದೇ ಚರಂಡಿಯನ್ನು ಉಪಯೋಗಿಸಬಹುದು. ಇವುಗಳ ವಿನ್ಯಾಸವನ್ನು ಹಿಂದೆಯೇ ವಿವರಿಸಿದೆ. ಇದಕ್ಕಾಗಿ ಅಂಡಾಕಾರದ ಚರಂಡಿ, ಅರ್ಧ ವರ್ತುಳಾಕಾರದ ಚರಂಡಿ ಮುಂತಾದವನ್ನು ಉಪಯೋಗಿಸಬಹುದು. ಇವುಗಳ ನಕಾಶೆ ತಯಾರಿಸುವಾಗ ಸಾಮಾನ್ಯವಾಗಿ ಹರಿದುಹೋಗುವ ನೀರಿನ ಮೊತ್ತಕ್ಕಿಂತ ಹೆಚ್ಚಿನ ನೀರು ಹರಿದು ಹೋಗಲು ಅವಕಾಶ ಕಲ್ಪಿಸಿಕೊಡಬೇಕು. ವರ್ಷದಲ್ಲಿ ಸರಾಸರಿ ಮಳೆ 70 ಸೆಂ.ಮೀ. ಗಿಂತ ಹೆಚ್ಚಿರುವ ಕಡೆಗಳಲ್ಲಿ ಹೊಲಸು ನೀರು ಹಾಗೂ ಮಳೆನೀರು ಹರಿದುಹೋಗಲು ಬೇರೆ ಬೇರೆ ಚರಂಡಿಗಳನ್ನು ನಿರ್ಮಿಸಬೇಕು. ಈ ಹಿಂದೆ ಕೊಟ್ಟಿರುವ ಯಾವ ಚರಂಡಿಯ ಮಾದರಿಯನ್ನು ಬೇಕಾದರೂ ಅನುಸರಿಸಿ ರಚಿಸಬಹುದು. ಮಳೆ ನೀರು ಹರಿದು ಹೋಗಲು ಭೂಮಿಯ ಮೇಲೆ ನಿರ್ಮಿಸುವ ಹೊರಚರಂಡಿಗಳನ್ನು ಕೂಡ ಉಪಯೋಗಿಸಬಹುದು. ಇವನ್ನು ಪ್ರತಿಯೊಂದು ರಸ್ತೆಯ ಅಂಚಿನಲ್ಲಿಯೂ ನಿರ್ಮಿಸಬೇಕು.
ಚಿತ್ರದಲ್ಲಿ ಕಾಣಿಸಿರುವ ಚರಂಡಿಗಳಲ್ಲಿ 1 ರಿಂದ 4 ರವರೆಗೆ ಸಾಧಾರಣ ಮಳೆಯಿರುವ ಕಡೆ ಉಪಯೋಗಿಸುವ ಚರಂಡಿಗಳು. 5, 6 ರಲ್ಲಿ ಕೊಟ್ಟಿರುವ ಚರಂಡಿಗಳನ್ನು ಹೆಚ್ಚಿನ ಮಳೆ ಬರುವ ಕಡೆ ಉಪಯೋಗಿಸಬಹುದು. 

ಚಿತ್ರ-6

ಚರಂಡಿಗಳನ್ನು ಕಾಂಕ್ರೀಟ್ ಅಡಿಪಾಯದ ಮೇಲೆ ಸೈಜು ಕಲ್ಲು ಅಥವಾ ಇಟ್ಟಿಗೆಗಳಿಂದ ಕಟ್ಟಬಹುದು. ರಸ್ತೆಯ ನಿರ್ಮಾಣ ಸರಿಯಾಗಿದ್ದರೆ ಮಳೆ ನೀರು ಚರಂಡಿಗೆ ಸರಾಗವಾಗಿ ಹರಿದುಹೋಗುವುದು. ಕೆಲವು ಸಲ ರಸ್ತೆಯಲ್ಲಿ ಹರಿಯುವ ನೀರು ಮ್ಯಾನ್‍ಹೋಲ್ ಮೂಲಕ ಒಳಚರಂಡಿಯನ್ನು ಸೇರುತ್ತದೆ. ಹೀಗೆ ಹರಿದುಹೋಗುವ ಮಳೆಯ ನೀರು ಸಮುದ್ರ, ನದಿ, ಕೆರೆ ಅಥವಾ ಊರಿನ ಹೊರವಲಯದಲ್ಲಿರುವ ತಗ್ಗು ಪ್ರದೇಶಕ್ಕೆ ಹೋಗಿ ಬೀಳುವಂತೆ ಏರ್ಪಡಿಸಬೇಕು.
(ಕೆ.ಎ.ಆರ್.; ಜಿ.ಟಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ